Sunday, September 8, 2013

ಸ್ವರ್ಣ ಗೌರಿ

ನಾ ಬೇಡ ಬೇಡವೆಂದರೂ
ಪ್ರೀತಿಯಿಂದ ಹೇಳಿದರೂ, 
ನೀ ನನ್ನ ಮಾತುಗಳ 
ಕೇಳುವುದೇ ಇಲ್ಲಾ ನೋಡು ,
ಈ ಸ್ಮಶಾನವಾಸಿಯ,
ವೈರಾಗ್ಯ ಮೂರ್ತಿಯ
ವಿಭೂತಿಯ ಮೈಗೆ ಬಳಿದವನ
ಮಾತೆಂದರೆ ನಿನಗೂ ಅಸಡ್ಡೆಯೆ;

ಆಮಂತ್ರಣವಿಲ್ಲದೆ
ನೀ ತವರಿಗೆ ಹೋದರೆ
ನಿನಗೆ ಯಾರೂ ಅಲ್ಲಿ,
ಅಘ್ರ ತಾಂಬೂಲವಿತ್ತು
ಮುದ್ದಿನ ಕೊನೆಯ ಮಗಳು
ಮನೆಗೆ ಬಂದಿಹಳೆಂದು,
ಸ್ವಾಗತಿಸಿ ಕರೆದುಪಚರಿಸಿ,
ನಿನ್ನ ಮುದ್ದಿಸರು ತಿಳಿ ಗೌರಿ;
ನೀ ಅಲ್ಲಿಗೆ ಹೋಗದೆ ಇಲ್ಲಿಯೇ
ನೀ ಸುಮ್ಮನಿರುವುದೇ ಲೇಸು !

ಪ್ರಿಯೆ ಸ್ವರ್ಣ ಗೌರಿ,
ಹಿಂದೊಮ್ಮೆ ನೆನಪಿಸಿಕೊ
ನಿನ್ನಪ್ಪ ದಕ್ಷ ಪ್ರಜಾಪತಿಯ
ಮಹಾ ಯಜ್ಞಕ್ಕೆ
ನಾ ಬೇಡವೆಂದರೂ
ಕೇಳದೆ ನೀ ಹೋಗಿ,
ಅವಮಾನಿತಳಾಗಿ
ಯಜ್ಞ ಕುಂಡದಲ್ಲೇ ಅಸುನೀಗಿ
ಪ್ರಾಣ ತೆತ್ತದ್ದು ಮರೆತೆಯೆ,
ಹೋಗುವುದಾದರೆ
ಭೂಲೋಕಕ್ಕೆ,;
ನೀ ಈಗಲೇ ಹೋಗು
ತವರಿನ ಆನಂದವ ಅನುಭವಿಸು
ನಿನ್ನ ಭಕ್ತಿ ಭಾವದಿ ಪೂಜಿಸಿ,
ಮನೆ ಮಗಳೆಂದು ಉಪಚರಿಸುವರು
ತವರಿನ ಭಾಗೀನ ಕೊಟ್ಟು ಮಡಿಲಕ್ಕಿ
ಮಡಿಲ ತುಂಬಿ ಕಳುಹಿಸುವರು !

2 comments:

  1. ತುಂಬಾ ಚಂದದ ಸಾಲುಗಳು ಚೆನ್ನ ಬಸವರಾಜ್ ರವರೆ, ಇಲ್ಲಿ ಸೇರಿಸಿದ ಪೋಟೊ ತುಂಬಾ ಸುಂದರವಾಗಿದೆ.

    ReplyDelete
  2. ನಿಮ್ಮ ಮೆಚ್ಚುಗೆಯ ಪ್ರೋತ್ಸಾಹಕ್ಕೆ, ಮುಕ್ತ ಮನಸ್ಸಿನ ಮಾತುಗಳಿಗೆ ಧನ್ಯವಾದಗಳು Chandrashekar Ishwar Nai। ರವರೇ.

    ReplyDelete