Thursday, June 19, 2014

" ನಮಗೂ.... ನಿಮ್ಮಂತೆ ಮನಸ್ಸಿದೆ "

ಹೊಚ್ಚ ಹೊಸತರಲ್ಲಿ ನನಗೂ ದಮ್ಮಿತ್ತು
ಎಲ್ಲೆಂದರಲ್ಲಿ, ಹೇಗೆಂದರೆ ಹಾಗೆ
ನನ್ನ ಓಡಿಸಿದಷ್ಟು ಹೊತ್ತೊಯ್ಯುವ
ಹಾವಂತೆ ನುಸುಳಿ, ಚಿರುತೆಯಂತೆ ಓಡುವ ಬಲವಿತ್ತು,
ಹಗಲಿರುಳು ಸಾರೋಟದಿ ಸಾಗುವ ಚಲವಿತ್ತು;
ಕಲ್ಲುಮುಳ್ಳಿರಲಿ, ಮಳೆ ಗಾಳಿಯಲಿ ಹೆದರದೆ
ಕೊಳಕು ಕೊಚ್ಚೆಯೊಳಿಳಿದು ಏಸಿಗೆಗೆ ಮುನಿಯದೆ ಹೊತ್ತೊಯ್ಯುವಾಗ ನನಗೆ ನಾನೇ... ಸರಿಸಾಟಿ
ಬಂದು ಕೂತವಳ ಮುಖದಿ ನಗೆಯರಳಿಸಿ
ಬಿಗಿದಪ್ಪಿಸಿ, ಮೈಮನಸ್ಸುಗಳಲ್ಲಿ ಬಿಸಿ ಏರಿಸಿ
ಅವರಾಟಗಳ ಕಣ್ತುಂಬಿ ಕೊಂಡು ನಗುತ್ತಿದ್ದೆ....

ಅಬ್ಬಬ್ಬಾ .... ಅವನೆಂಥವನಿರಬೇಕು ದಡೂತಿ ಡುಮ್ಮ ಕೂತೊಡನೆ ಜೀವ ವಿಲ ವಿಲನೆ ಒದ್ದಾಡಿದರೂ....
ಕಟುಕನ ಮುಂದೆ ಕುರಿ ಕಣ್ಣೀರಿಟ್ಟಂತೆ ನನ್ನ ಸ್ಥಿತಿ
ನೊಂದರೂ ... ಬಿಕ್ಕಳಿಸಿ ಗೋಳಾಡಿದರು ಬಿಡದೆ,
ಬೇಕಾಬಿಟ್ಟಿ ಬ್ರೇಕ್ ಹಾಕಿ, ಹೊಟ್ಟೆಯುರಿಸಿ
ನಾ ಹೇಳಿದರೂ.... ನಿಮಗ್ಯಾರಿಗೂ ನನ್ನ ನೋವು ಕೇಳಿಸದು
ದಿನ ಕಳೆದಂತೆ ನಿಮ್ಮಂತೆ ನನಗೂ.... ಮುಪ್ಪು
ದಾರಿ ಸವೆಸಿ ಸವೆಸಿ ಸವೆದ ಮೈಚರ್ಮ
ಹೆಜ್ಜೆ ಎತ್ತಿಡಲಾಗದೆ ನಿಶ್ಯಕ್ತಿಗೆ ತಲೆ ತಿರುಗಿ
ಮೈಯೆಲ್ಲಾ .... ನೋವು ನೋವು
ಚುಚ್ಚಿದ ಮೊಳೆ ಕಿತ್ತೆಸೆದು ತೇಪೆ ಹಚ್ಚಿ;
ಪಂಚರ್ ಹಾಕುವವನ ಮಾತ ಕೇಳಿ
ಕೊನೆಗೊಂದು ದಿನ ಈ ದರಿದ್ರದ್ದು
ಎಲ್ಲಾದರು ನಿಮ್ಮ ಪ್ರಾಣ ತಿಂದೀತು
ಮೊದಲು ಬದಲಾಯಿಸಿ,
ಹೊಸದು ಟಯರ್ ಹಾಕಿ ಎನ್ನುವಾಗ
ನಾ ಇಷ್ಟು ವರ್ಷ ಕಾಪಾಡಿದ್ದು ಎಲ್ಲವೂ ... ವ್ಯರ್ಥ !!

2 comments:

  1. ಒಳ್ಳೆಯ ಭಾವ,,,, ಸವೆದ ನಿರ್ಜೀವಕ್ಕೆ ಜೀವ ತುಂಬಿದ್ದೀರಿ
    -- ಜೀ ಕೇ ನವೀನ್

    ReplyDelete
    Replies
    1. ನಿಮ್ಮೆಲ್ಲರ ಪ್ರೋತ್ಸಾಹದ ಅನಿಸಿಕೆ, ಅಭಿಪ್ರಾಯಗಳ ಮಾತುಗಳೇ... ನನಗೆ ಮತ್ತಷ್ಟು ಬರೆಯಲು ಪ್ರೇರಣೆ ಜೀ ಕೇ ನವೀನ್ ರವರೆ ಧನ್ಯವಾದಗಳು.

      Delete