Sunday, March 30, 2014

" ಕಲ್ಪನೆಗಳ ಕಾವ್ಯ ಕನ್ನಿಕೆ "

ಕರೆದಾಗಲೆಲ್ಲಾ ಕರುಣೆ ತೋರಿ
ಓಡೋಡಿ ಬರುತ್ತಿದ್ದವಳು,
ಉಸಿರಿಗೆ ಉಸಿರಾಗಿ ಬೆರೆತು
ಜೊತೆಯಾಗಿ ನಿಂತವಳು
ನನ್ನ ತೊರೆದು ಎಲ್ಲಿ ಹೋದಳೋ....

ನಲ್ಲೇ...ನೀ ನನ್ನ ಮದುವೆಯಾಗಿ
ಮನೆ ತುಂಬಿ, ಮೈದುಂಬಿ ಬಂದ ಮೇಲೆ
ಅವಳು ಈ ಹೃದಯದೊಳು ಏಕೋ ಇಲ್ಲ
ಎತ್ತ ಹೋದಳೋ..... ಒಂದೂ ಗೊತ್ತಿಲ್ಲ
ಇಲ್ಲೇ ಎಲ್ಲೋ... ಹೋಗಿ ಬರುವೆ ಎಂದವಳ
ಸುಳಿವಂತೂ ಎನಗೆ ತಿಳಿದೇ... ಇಲ್ಲ

ನಿನ್ನೊಲವ ಸುಖದ ಸುಳಿಗೆ ಸಿಲುಕಿ
ನಾನವಳ ಮರೆತು ಹೋದೆನೇನೋ.... ?
ಸುಳಿವ ತಂಗಾಳಿಯ ತಂಬೆಲರಂತೆ
ಮಿಡಿವ ಮನಕೆ ಇಂಪಾದ ಹಾಡಂತೆ
ನನ್ನ ಸಂತೈಸಿ, ಅಪ್ಪಿ ಮುದ್ದಾಡುತ್ತಿದ್ದವಳು

ಹಗಲಿರುಳೆನ್ನದೆ, ಮಳೆಗಾಳಿಯೆನ್ನದೆ
ಬೆಚ್ಚನೆಯ ಈ ಮೈ ಮನಕೆ
ತಂಪು ಹೊದಿಕೆಯ ಹೊದಿಸಿ
ನಿದಿರೆಗೆ ಮದಿರೆಯಾಗಿದ್ದಳು
ಸುತ್ತಾಡದ ಜಗವಿರಲಿಲ್ಲ
ಅಡ್ಡಾಡದ ದಿನವಿರಲಿಲ್ಲ
ಕನಸ್ಸುಗಳಲ್ಲೇ... ನನ್ನ ತೇಲಿಸಿ
ಬಾಳ ಬಾನಂಗಳದಿ ಚಂದ್ರಿಕೆಯಾಗಿದ್ದಳು

ನಮ್ಮಲ್ಲಿರಲಿಲ್ಲ ವಿರಸದ ಜನನ
ಪ್ರತಿಕ್ಷಣವೂ ರಸಮಯ ತನನ
ಮುನಿಸು ತೊರೆದ ಬೆಳ್ಮುಗಿಲಾಗಿದ್ದಳು
ಕನಸುಗಳ ಬಿತ್ತಿ ಕಣ್ಮಣಿಯಾಗಿದ್ದವಳು

ನಾ ನಿಟ್ಟುಸಿರಿಟ್ಟರೂ ಎದ್ದೋಡಿ ಬರುತ್ತಿದ್ದಳು
ಕಂಗಾಲಾದರೂ ಮಿಡುಕಾಡಿ ಒದ್ದಾಡುತ್ತಿದ್ದಳು
ನೀ ನನ್ನ ಕೈಹಿಡಿದ ಮೇಲೆ
ನಿನ್ನ ಯೌವನದ ಕಿಚ್ಚು ಹೊಳೆಯೊಳಗೆ 
ಕೊಚ್ಚಿ ಹೋದ ಮೇಲೆ ಕಾಣೆಯಾದಳು 

ನಿದ್ದೆಯಲ್ಲಿ ನಾ ಬಡ ಬಡಿಸುವಾಗ
ನೀ ಅನುಮಾನಗೊಂಡು ನನ್ನೇ ಪ್ರಶ್ನಿಸಿದ್ದೆ
ನಲ್ಲೇ... ನೀ ಬರುವ ಮುಂಚೆಯೇ....
ಅವಳೆದೆಯಲ್ಲಿ ನಾ ನಿಶ್ಚಿಂತೆಯಾಗಿದ್ದೆ
ಅಯ್ಯೋ...! ಅರಿವಿಲ್ಲದಾ ಮಂಕೇ...
ನಿನಗೇಕೆ ಅವಳ ಮೇಲಯೇ ಶಂಕೆ
ನಿನಗೆ ಸವತಿಯೂ ಅವಳಲ್ಲ
ಪ್ರತಿ ರಾತ್ರಿಗೆ ಪ್ರತಿಸ್ಪರ್ಧಿಯಲ್ಲ
ನನ್ನೊಳಗಿನ ಕಲ್ಪನೆಗಳ " ಕಾವ್ಯ ಕನ್ನಿಕೆ "

No comments:

Post a Comment