Monday, March 24, 2014

" ಬಿಸಿಲ್ಗುದರೆ "

ಸಂಜೆ ಬರುವಾಗ ಹಾಗೆಯೇ ಹೂವು, ಹಣ್ಣು
ಮಲ್ಲಿಗೆಯ ಜೊತೆಗೆ ಒಂದಷ್ಟು ಖಾರ, ಸ್ವೀಟು
ಸ್ವಲ್ಪ ಧಾರಾಳವಾಗಿ ತನ್ನಿ
ಇದರಲ್ಲೂ ನಿಮ್ಮ ಜಿಪುಣತನ ಬೇಡ ;
ನನ್ನವಳ ಕಟ್ಟಪ್ಪಣೆ !
ಇಂದೇನು ಜನ್ಮದಿನವೆ ನಿನ್ನದು, ನನ್ನದು
ಮಕ್ಕಳದ್ದು, ಇಲ್ಲವೇ.... ಇಲ್ಲ
ನಮ್ಮ ಮದುವೆಯ ವಾರ್ಷಿಕೋತ್ಸವವೇ...?
ಅದು ಸದ್ಯಕ್ಕಂತೂ.... ಇಲ್ಲ ಬಿಡಿ ,
ಹಾಗಿದ್ದ ಮೇಲೆ ಮತ್ತೇಕೆ ಇಷ್ಟೆಲ್ಲಾ ಖರ್ಚು...?
ಕಣ್ಣೊಡೆದು ನಕ್ಕು
ನನ್ನವಳ ಕೇಳಿಯೇ ಬಿಟ್ಟೆ ;
ಏನಾದರು ರಾತ್ರಿಗೆ ವಿಶೇಷವೇ...?
ಆ ಹಾ.... ಚಪಲ ಚೆನ್ನಿಗರಾಯರು
ನಿಮ್ಮದು ಯಾವಾಗಲೂ ಇದ್ದದ್ದೇ
ಮೊದಲು ಇಲ್ಲಿಂದ ಹೊರಡಿ,
ಹಾಗೆಯೇ ನಿಮ್ಮನಿಲ್ಲಿ ಬಿಟ್ಟರೆ
ನನ್ನ ಕೈಕಾಲು ತಲೆಯೂ ಓಡದು...
ಇಂದು ಆಫೀಸಿಗೆ ನೀವು ಹೋದಂತೆ ...
ಇದೆಲ್ಲಾ .... ಇಂದೇ ತರಬೇಕೆ ?
ತಿಂಗಳ ಕೊನೆ ಬೇರೆ, ಹಣದ ಮುಗ್ಗಟ್ಟು
ದಿಢೀರೆಂದು ಕೇಳಿದರೆ ಹೇಗೆ ?
ನಾಳೆ, ನಾಡಿದ್ದು ತಂದರಾಗದೇ.....?
ರ್ರೀ .... ಸುಮ್ಮನೆ ನನ್ನ ರೇಗಿಸಬೇಡಿ,
ಹೋಗಿಹೋಗಿ ನಿಮಗೇಳಿದ್ದು ನನ್ನ ತಪ್ಪು;
ನೀವು ತರುವುದೇನೂ ಬೇಡ
ನಾನೇ ಎಲ್ಲಾ ...ತಂದು ಕೊಳ್ಳುವೆ
ಒಂದೆರಡು ಸಾವಿರ ಕೊಟ್ಟು ಹೊರಡಿ...
ಗುಟ್ಟು ಬಿಡದ ನನ್ನವಳ ಕಂಡು
ಮನ ತುಸು, ಸಿಟ್ಟೇರಿದರೂ...
ಅವಳು ಕೇಳಿದ ದುಡ್ಡು ಕೊಟ್ಟು
ಮಧುರ ರಾತ್ರಿಯ ಕನಸ್ಸು ಕಾಣತ
ಆಫೀಸಿಗೆ ಬಿರಬಿರ ಹೊರಟಿದ್ದೆ...
ನೀರವ ರಾತ್ರಿಯ ನೀಳ ತೋಳ್ಗಳಲಿ
ಕಾಲ್ಗೆಜ್ಜೆಯ, ಬಳೆಯ ಸದ್ದಿಗೆ
ಮನ ಹುಚ್ಚೆದ್ದು ಕುಣಿದು ,
ಲಾಭ ನಷ್ಟಗಳ ಲೆಕ್ಕಾಚಾರದಲ್ಲಿ
ಸಂಜೆ ಮನೆಗೆ ಬಂದಾಗಲೇ ಗೊತ್ತಾಗಿದ್ದು
ಅತ್ತೆ, ಮಾವ ನಾದಿನಿ
ಇವಳ ನೋಡಲು ಬಂದ ಹುಡುಗನ
ಮನೆಯವರ ದಂಡು ಕಂಡು....!!

No comments:

Post a Comment