Monday, August 11, 2014

" ಪೂಜೆ "

ಸಿಟ್ಟಾಗಿದ್ದಕ್ಕೆ ನನ್ನವಳು ಮುಟ್ಟಾಗಿ
ಸಿಡಿಮಿಡಿಗುಟ್ಟುತ ಚಾಪೆ, ಚೊಂಬು
ದಿಂಬಿಡಿದು ಹೊರ ಕೋಣೆಗೆ ನುಗ್ಗಿ
ಬಾಗಿಲ ಒದ್ದು, ಕದ ಮುಚ್ಚಿ;
ವಟಗುಟ್ಟುವವಳ ಕಂಡು
ಪಿತ್ತ ನೆತ್ತಿಗೇರದೆ ಮತ್ತಿನ್ನೇನು ನೀವೆ ಹೇಳಿ ?
ಗಿಡದಲ್ಲೇನು ಗರಿಗರಿ ನೋಟುಗಳು ಬಿಡುವುದೆ?
ಕೇಳಿದಾಗಲೆಲ್ಲಾ ಕಿತ್ತು ಕೊಡುವುದಕ್ಕೆ
ಮಂತ್ರ ತಂತ್ರಕ್ಕೇನು ಉದುರುವುದೆ
ತಿಂಗಳ ಪೂರ ಮಕ್ಕಳ ಮುಂದೆ ಗಂಟಲರಚಿ ಕೂಗಿ,
ಪಾಠ ಮಾಡಿ ದುಡಿದು ಮನೆಗೆ ಬಂದರೆ
ಇವಳ ಬೇಡಿಕೆಗಳ ಪಟ್ಟಿ ನೋಡಿ ತಲೆ ಸುತ್ತದೆ
ಕಂಡಿದ್ದೆಲ್ಲ ಬೇಕೆಂದರೆ ಕೊಡಿಸಲಾದೀತೆ
ಹಾಸಿಗೆ ಇದ್ದಷ್ಟು ಕಾಲು ಚಾಚೇ... ಮಂಕೇ ಎಂದರೆ
ನನ್ನ ನೋಡಲು ಇಂಜಿನಿಯರ್, ಲಾಯರ್, ಡಾಕ್ಟರ್
ಕೋಟೆ ಬೀದಿಯ ಸಾಹುಕಾರರ ಮಗ
ಎಂತೆಂಥವರೋ... ಬಂದಿದ್ದರು
ಏನು ಮಂಕು ಬಡಿದಿತ್ತೋ ಏನೋ... ನನಗೆ
ನಿಮ್ಮ ಕೈಹಿಡಿದ ತಪ್ಪಿಗೆ ಜೀವಮಾನವೆಲ್ಲ
ನಾ ಕಷ್ಟದಲ್ಲಿಯೇ... ಬಾಳ ಬೇಕೇ....??
ವರದಕ್ಷಿಣೆ, ವರೋಪಚಾರಕ್ಕೆಂದು ಇವಳಪ್ಪನಿಂದ
ನಾ ಪಡೆದಿದ್ದರೆ ಸಾಕಷ್ಟು ಹಣ, ಸಾಲ
ಇವಳು ಕೈಚಾಚಿದಾಗಲೆಲ್ಲಾ... ಕೊಡಬಹುದಿತ್ತು
ನಾನೋ.... ಸರ್ಕಾರಿ ಫ್ರೈಮರಿ ಸ್ಕೂಲ್ ಮಾಸ್ತರು
ಬರುವ ಸಂಬಳದಲ್ಲಿ ದಿನಸಿ, ಮನೆ ಬಾಡಿಗೆ,
ಕರೆಂಟು ನೀರಿನ ಬಿಲ್ಲು, ಮಕ್ಕಳ ಫೀಜು
ಉಳಿದಿದ್ದರಲ್ಲಿ ಆಗಾಗ ಆಸ್ಪತ್ರೆಯ ಖರ್ಚು
ಈ ಎಲ್ಲಾ ಖರ್ಚುಗಳ ಸರಿದೂಗಿಸಿ
ಸುಸ್ತಾಗಿರುವಾಗ
ಹಬ್ಬಕ್ಕೆ ರೇಶಿಮೆಯ ಸೀರೆಯಂತೆ,
ಕಿವಿಗಳಿಗೆ ಬೆಂಡೊಲೆ, ಪೂಜೆ ಪುನಸ್ಕಾರಕ್ಕೆಂದು
ಹಣ್ಣು, ತರಕಾರಿ ಖರ್ಚಿಗೊಂದಷ್ಟು ಕೊಟ್ಟಿದ್ದರೆ
ಎತ್ತಿ, ಹೊತ್ತು ಕುಣಿದಾಡುತ್ತಿದ್ದಳೋ ಏನೋ....!! 

No comments:

Post a Comment