Sunday, September 7, 2014

" ನಶೆ "

ನೀ ನನ್ನ ನಂಬೇ.... ಮಾರಾಯ್ತೀ....
ನಿನ್ನಾಣೆಗೂ ಕುಡಿಯುವುದ ಬಿಟ್ಟಿರುವೆ
ಬೇಕಿದ್ದರೆ ನೀನೇ... ಬಾಯ ತೆರೆದು ನೋಡು
ವಾಸನೆ ಬಂದರೆ ನನ್ನ ಒಳ ಸೇರಿಸ ಬೇಡ;
ಕುಡಿತದಿಂದ ಮಾನ, ಮರ್ಯಾದೆಯಲ್ಲ ಹಾಳು
ದಿನನಿತ್ಯ ಮಡದಿ, ಮಕ್ಕಳ ಗೊಣಗಾಟ
ಸುಮ್ಮನೆ ಹಣವು ವ್ಯರ್ಥ, ಆರೋಗ್ಯ ಇತ್ಯರ್ಥ
ಈ ನಶೆಯಿದ್ದರೆ ಎಷ್ಟು ಹೊತ್ತು ಇರಬಹುದೇ...?
ಒಂದರ್ಧ ದಿನ, ಮತ್ತಷ್ಟು ಏರಿಸಿದರೆ ನಾಳೆಗೆ
ಕುಡಿತದಿಂದ ಸಿಗುವ ಸುಖಕ್ಕಿಂತ
ಇಲ್ಲೇ... ಸಿಗುವ ಅಮೃತ ಕುಡಿಯದೆ
ಇನ್ನೆಲ್ಲೋ ... ಸಿಗುವ ಅಮಲಿಗೆ ಶರಣಾಗಿದ್ದೆ
ಮೊದ ಮೊದಲು ಇದರ ಅರಿವಿರಲಿಲ್ಲ
ಹಾಳಾದ್ದು ಈ ನಶೆಯ ಗಮ್ಮತ್ತಿರಬೇಕು
ನಶೆಯ ಪೊರೆ ಕಳಚಿ ನಿನ್ನ ನೆನಪಾಗಿದ್ದು
ನೀ ಹೊತ್ತ ದೇವರ ಹರಕೆ, ಪೂಜೆಯ ಫಲ
ಜೊತೆಗೆ ನೀ ಸೀರೆ ಸೆರಗ ಸಿಕ್ಕಿಸಿ, ಕೊರಳ ಕೊಂಕಿಸಿ
ಹೆರಳ ಹರಡಿ ಬಳುಕಿ ಬರುವಾಗ ಈ ಎದೆಯೊಳಗೆ
ನೂರಾರು ಮಧುರ ಮೈತ್ರಿಯ ಅರುಣರಾಗ...
ಆ ಹಾ ಕುಡಿಯುವುದ ಬಿಟ್ಟದ್ದಕ್ಕೆ ನೀ ನಗಬೇಕಾದ್ದೆ !
ಈ ಖುಷಿಗೆ ನೂರರ ಒಂದೈದು ನೋಟು ತಾ
ಹೀಗೆ ಹೋಗಿ ಹಾಗೇ... ಬೇಗ ಬಂದು ಬಿಡುವೆ !

1 comment:

  1. ಹೀಗೆ ಹಾಗೆ ಹಾಗೆ ಬಣ್ದು ಬಿಡ್ತೀರಾ? ಆಮೇಲೆ ಇದೆ ಅಸಲೀ ಮಹಾಭಾರತ!

    best of ur composition:
    ಜೊತೆಗೆ ನೀ ಸೀರೆ ಸೆರಗ ಸಿಕ್ಕಿಸಿ, ಕೊರಳ ಕೊಂಕಿಸಿ
    ಹೆರಳ ಹರಡಿ ಬಳುಕಿ ಬರುವಾಗ ಈ ಎದೆಯೊಳಗೆ
    ನೂರಾರು ಮಧುರ ಮೈತ್ರಿಯ ಅರುಣರಾಗ...

    ReplyDelete