Sunday, July 21, 2013

ಪುನರ್ ವಿವಾಹ

ಇರಲಿ ಬಿಡು ಗೆಳತಿ
ಈ ನಗು ಹೀಗೆಯೇ
ನೀ ನಕ್ಕು ಎಷ್ಟೋ
ವರ್ಷಗಳಾಗಿತ್ತು;
ನೋವುಗಳೊಂದಿಗೆ
ಸದಾ ಸೆಣಸಾಡಿ, ಗುದ್ದಾಡಿ
ಬದುಕಿನ ಬಾಳ ಬಂಡಿಯಲಿ;
ಬೆಂದೆದ್ದು ನೀ ಬಂದಿರುವೆ
ಸಾಗುತ್ತಿರಲಿ ಹೀಗೆಯೇ
ಈ ಸಮರಸ ಜೀವನ !

ಈ ಸಾವೂ ನೋವುಗಳು
ಯಾರಿಗಿರುವುದಿಲ್ಲ ಹೇಳು
ಅವು ಯಾರನ್ನೂ ಬಿಡವು
ಇಂದು ಅವ, ನಾಳೆ ಮತ್ತೊಬ್ಬ
ಹುಟ್ಟಿದವ ಸಾಯಲೇ ಬೇಕಲ್ಲ
ವಿಧಿಯ ಚದುರಂಗದಾಟದಿ
ಅವ ನಡೆಸುವ ಕಾಯಿಗಳು !

ನಾ ಎಷ್ಟೋ ಬಾರಿ ನಿನಗೆ
ಹೇಳ ಬೇಕೆಂದು ಕೊಂಡ
ಕೇಳ ಬೇಕೆಂದು ಕೊಂಡ
ಮಾತುಗಳು ನನ್ನಲ್ಲಿಯೇ
ಹೇಳಲಾಗದೆ, ಕೇಳಲಾಗದೆ
ಹಾಗೆಯೇ ಉಳಿದಿದ್ದು ನಿಜ;
ನೀ ನನ್ನ ಏನೆಂದು ತಿಳಿಯುವೆಯೋ
ನಮ್ಮಿಬ್ಬರ ಸ್ನೇಹಕೆ ಚ್ಯುತಿ ಬರುವುದೋ
ಎಂಬ ಭಯಕೆ ನಾನೇ ಸುಮ್ಮನಾಗಿದ್ದೆ !

ನಿನ್ನ ಸ್ನೇಹಿತೆಯ ಬಳಿ ನಾ
ನಮ್ಮಿಬ್ಬರ ಮದುವೆಯ ಬಗ್ಗೆ
ಪ್ರಸ್ತಾಪಿಸಿದಾಗ
ಅವಳು ಹೇಳಿದ್ದೇನು ಗೊತ್ತೇ,
ಆರ್ ಯು ಮ್ಯಾಡ್ ಸರ್
ಅದು ಹೋಗಿ ಹೋಗಿ
ವಿಧವೆಯ ಬಯಸಿ
ಮದುವೆಯಾಗುವುದೆ,
ನಿಮಗೆಲ್ಲೂ ಹೆಣ್ಣು ಸಿಗಲಿಲ್ಲವೇ;
ನನಗಿಂತ ಬೇರೆ ಹೆಣ್ಣು ಬೇಕೆ !

ಅವಳೆಂದ ಮಾತಿಗೆ ನಾ
ತುಸು ಕೋಪಗೊಂಡರೂ
ನನ್ನಾ ನಿನ್ನ ಬಾಲ್ಯದ ಒಡನಾಟ
ಜೊತೆ ಜೊತೆಯಲ್ಲಿ ವಿಧ್ಯಾಭ್ಯಾಸ
ನನ್ನ ಕಡು ಬಡತನದಲ್ಲೂ
ಸ್ಪೂರ್ತಿ, ಹಣದ ಬೆಂಬಲವಾಗಿ ನಿಂತು
ಇಂದಿನ ಈ ಸ್ಥಿತಿಗೆ ನೀ ಕಾರಣವಾಗಿದ್ದು
ಎಲ್ಲವ ಹೇಳಿದ ಮೇಲೆ, ಕೇಳಿದಾಗ
ಅವಳ ಕಣ್ಣಲ್ಲಿಯೂ ಸಹ ಕಂಬನಿ ಮೂಡಿತ್ತು !

ಆದದ್ದೆಲ್ಲಾ ಒಳ್ಳೆಯದಕ್ಕೇ ಎಂದು
ಹಿಂದಿನದ್ದೆಲ್ಲಾ ನೀ ಮರೆತು ಬಿಡು
ಅಂತೂ ಇಂತು ನಮ್ಮ ಮದುವೆಗೆ
ಒಪ್ಪಿಗೆಯಿತ್ತೆಯಲ್ಲ, ನನಗಷ್ಟೇ ಸಾಕು !

No comments:

Post a Comment