Sunday, July 28, 2013

ಬುದ್ಧಿಮಾತು

ನೀ ಕೇಳಬೇಕು ನನ್ನ ಮಗಳೆ
ಈ ತಾಯ ಕಿವಿಮಾತು
ನೀ ತರಬೇಡ ಎಂದೂ ರಗಳೆ
ಪ್ರೀತಿ ಪ್ರೇಮಕೆ ಸೋತು ॥

ಬಣ್ಣಬಣ್ಣದಾ ಸವಿ ಮಾತಿಗೆ
ಎಂದೂ ಮರುಳಾಗದಿರು 
ಸುಣ್ಣದಾ ತಿಳಿ ನೀರೆಂದಿಗೂ
ಕುಡಿವ ಹಾಲಾಗದು ॥

ಬೆಂಕಿಯಾ ಬಳಿ ಮೇಣವೇ ಸುಳಿದರು
ಮೇಣದಾ ಬಳಿ ಬೆಂಕಿಯೇ ಸುಳಿದರು
ಕರಗದಿರದು ಬಿಸಿಗೆ ತಾ ಮೇಣ
ನಮಗೆ ಹೆಚ್ಚು ನಮ್ಮ ಮಾನ ಪ್ರಾಣ  ॥

ಅರಿವಿರಲಿ ಮಗಳೇ ಹರೆಯದಲಿ
ಚೆಲ್ಲುಚೆಲ್ಲುತನ, ನಡೆನುಡಿಯು ಬೇಡ
ನಿಲ್ಲುವಾ ಮುಂಚೆ ನಿನಗೆ ತಿಳಿದಿರಲಿ
ಅಕ್ಕ- ಪಕ್ಕಕೆ ಸರಿದು ಬರುವ ಜಾಡ ॥

ನನಗಿಹುದು ನನ್ನಲ್ಲಿ ಅಭಿಮಾನ
ನನಗಿರದು ನಿನ್ನಲ್ಲಿ ಅನುಮಾನ
ತಿಳಿ ಹೇಳುವುದಷ್ಟಲ್ಲ ನನ್ನ ಕೆಲಸ
ನಿನಗಾಗದಿರಲಿ ಎಂದೂ ಮೋಸ ॥

ಮದುವೆಗೆ ಮೊದಲೇ ತಾಯಾಗಿ ನಿಂತರೆ
ಮುಖಕ್ಕೆ ಎತ್ತು ತಾರೆ ಜನ ಮಂಗಳಾರತಿ
ಮದುಮಗಳು ನೀನಾಗಿ ಹೊತ್ತು ಹೆತ್ತರೆ
ಮಂಗಳೆಯರು ತರುತಾರೆ ದೀಪದಾರತಿ ॥

No comments:

Post a Comment