Tuesday, July 30, 2013

ಧನದಾಹ

ಅರ್ರೆರೇ..! ನೀನಾ, ಮೀನ ?
ಅದೇನು ಬಂದ್ದು ಈ ದಿನ ?
ಕ್ಷೇಮವೆ,  ಸೌಖ್ಯವೆ ?
ಮತ್ತೇನೋ ಹೇಳುವಂತಿದೆ !

ಮದುವೆಯಾಗ ಬೇಕೆ, ನಿನ್ನ ಮದುಮಗನು ನಾನಾಗಿ ಬದುಕಿ ಬಾಳ ಬೇಕೆ ಕೈಹಿಡಿದು ಜೊತೆಜೊತೆಯಾಗಿ ಕನಸ್ಸಿನ ಗುಡಿ - ಗೋಪುರಗಳ ನೀನೇಕೆ ಕಟ್ಟುವೆ
ಬಿದ್ದು ಚೂರು ಚೂರಾದೀತು ಗೋಪುರವು ಜೋಕೆ  ॥

ಮಸಣದಾ ಮಲ್ಲಿಗೆಯ ಮುಡಿವರುಂಟೆ
ಬಡತನದ ಬಾಲೆಯ ಕೈಹಿಡಿವರುಂಟೆ
ಗುಣವಿದ್ದರೆ ಸಾಕೆ, ರೂಪವಿದ್ದರೆ ಸಾಕೆ
ಹಣವಿರಬೇಕು, ಕೈತುಂಬ ಈ ಕಾಲಕೆ  ॥

ಹೋಗು ಹೋಗೆಲೇ ಹುಡುಗಿ ನೀ ತಿರುಗಿ
ಬರಬೇಡ ಹಿಂದೆ, ಸಿಡಿಲು - ಗುಡುಗಾಗಿ
ಸುಖ ಕಂಡಾಯ್ತು, ಹಣ ನೀಡಾಯ್ತು
ನನ್ನಾ ನಿನ್ನಾ ಕೊಂಡಿ ಕಳೆಚಾಯ್ತು ॥

ಬೇಕಿದ್ದರೆ ನೀ ಕೇಳು ಸಾಕಷ್ಟು ಕೊಡುವೆ ಹಣವ ಹೆಗಲಿಗೇರಿಸ ಬೇಡ ಮತ್ತೊಮ್ಮೆ ನಿನ್ನ ಋಣವ
ನೂರರ ಎರಡು ನೋಟು ಸಾಕೆ, ಮತ್ತಷ್ಟು ಬೇಕೆ
ಏನೂ...... ನನ್ನ ಸನಿಹ ಒಂದಿದ್ದರೆ ನಿನಗೆ ಸಾಕೆ ॥

ಎನಗೆ ನೀ ಚರಣದಾಸಿಯಾಗಲೂ ಬೇಡ
ಎನ್ನ ಮನೆಯ ಜ್ಯೋತಿಯಾಗಲೂ ಬೇಡ
ನೀ ಯಾರೋ ನಾ ಯಾರೋ ಹೋಗಲೇ ಮರುಳೆ
ಭುವಿ ಎತ್ತ, ಬಾನೆತ್ತ ಹೋಗು ಹೋಗಲೇ ಇರುಳೆ ॥

ಏನೂ.. ಭುವಿಗೆ - ಬಾನಿಗೆ ಬೆಸುಗೆಯೇ ಕತ್ತಲು
ಇರುವ ಹೊತ್ತಾದರೂ ಎಷ್ಟು, ಆ ಕರಾಳ ಕತ್ತಲು ಕತ್ತಲದೂಡಿ ಬಾರದಿರುವುದೇ ಆ ಹೊಂಬಿಸಿಲು ಸಿರಿತನವೇ ಹೊಂಬಿಸಿಲು, ಬಡತನವೇ ಕತ್ತಲು ॥

ತರುವೆಯೇನು ಬಯಸಿದಷ್ಟು ಹಣವ
ಕೈಹಿಡಿದು ಜೊತೆಯಾಗಿ ಅಪ್ಪಿ ನಡೆವ
ನೀನೋ ಬಡತನದಿ ಬೆಂದು ಬೆಳೆದ ಬಾಲೆ
ನನಗೂ ನನ್ನವರಿಗೆ ಮೋಹ ಹಣದ ಮೇಲೆ ॥

ಹಣದ ಮಹಿಮೆಯ ನೀನೇನು ಬಲ್ಲೆ
ದಿನದ ಒಡನಾಡಿ ಈ ಹಣವು ಗೊತ್ತೆ
ಹಣವಿಲ್ಲದವನ ಬಾಳು ಹೆಣಕ್ಕಿಂತ ಕೀಳು
ಇರುವಾಗ ಹಣವು ಬಾಳೆಲ್ಲಾ ಹಾಲ್ಜೇನು

ಮಳೆಕಾಣದ ಭುವಿಗೆ ಮಳೆ ತಣಿಸಿದ್ದು ತಪ್ಪೆ
ಚಳಿಗಾಲದ ಮೈಗೆ ಬಿಸಿಯ ನೀಡಿದ್ದು ತಪ್ಪೆ
ಬೀಜ ಬಿತ್ತಾಯ್ತು, ಎನಗೆ ನಿನಗೆ ಮೋಜಾಯ್ತು
ಬಿಟ್ಟ ಫಲವೆಲ್ಲ ನಿನ್ನ ಬಾಳ ಪಥದ ಸೊತ್ತಾಯ್ತು ॥

ಅಯ್ಯೋ..! ಶತಮೂರ್ಖ ಓ ನನ್ನ ಗಂಡಸೇ
ಕಾಲ ಬದಲಾಗಿದೆ, ಭಂಡ ಧೈರ್ಯವ ಬಿಡು
ಬಾಳುವ ಭಾಗ್ಯವ, ತಾಳಿಯ ಭಾಗ್ಯವ ನೀಡು
ಬೀದಿ ಪಾಲಾದೀತು ಮಾನ ಎಚ್ಚರ, ಟೀವಿ ಎದರು ॥

No comments:

Post a Comment