Thursday, August 1, 2013

ರಮಾ ರಾಮನಾದ

ಸೈಕಲ್ನಿಂದಿಳಿದ
ನಮ್ಮಿಬ್ಬರ ನೋಡಿ
ಕಣ್ ಕಣ್ ಬಿಟ್ಟು ಎಲ್ಲರೂ
ಮುಸಿ ಮುಸಿ ನಗುವವರೇ,
ನನಗೋ ಒಮ್ಮಿಂದೊಮ್ಮೆ
ಎಲ್ಲರ ಬೈಯ್ಯುವಷ್ಟು ಸಿಟ್ಟು;
ಏಯ್ ನಮ್ ಮುಖದಲ್ಲೇನ್
ಕೋತಿ ಗೀತಿ ಕುಣೀತಿದೆ ಏನ್ರೇ
ಬೇವರ್ಸಿ ಮುಂಡೇವೆ
ಆಗ್ಬಾರ್ದು, ಬರಬಾರ್ದು
ಏನಾಗಿದೇಂತ ನಗತ್ತಿದ್ದೀರ;
ಕಚಡಾ ಕಂತ್ರಿ ನಾಯಿಗಳ
ಏನೂಂತ ಈಗಲೇ ಹೇಳಿಲ್ಲಾಂದ್ರೆ
ಒಬ್ಬಬ್ಬರ್ನೂ ಒದೀತೀನಿ ನೋಡಿ ॥

ಲೇಯ್ ಬಾಯ್ಬಡ್ಕೀ ರಮಾ,
ನಿಮಗಷ್ಟೂ ಗೊತ್ತಾಗಿಲ್ವೇನ್ರೆ
ಮೈ ನೆರೆದಿದ್ದೀರಿ ಅಂತ;
ಬಿಳೀ ಲಂಗಕ್ಕಂಟಿದ್ದ
ರಕ್ತದ ಕಲೆಗಳ ತೋರಿಸಿ
ಬಿದ್ದು ಬಿದ್ದು ನಕ್ಕವಳ ಕಂಡು
ಏಯ್ ಕರೀ ಮುಸುಡೀ
ಆ ತರಹ ನನ್ಗೇನ್ ಆಗಿಲ್ವೇ ;
ಎಲ್ಲಾ ಆಗಿರೋದು ಇವ್ಳಿಗೆ
ಭಾಮಳ ಕಡೆ ತೋರಿಸಿದ್ದೆ ॥

ಅಯ್ಯೋ.. ಆ ಹುಡುಗರಿಗೆ 
ಗೊತ್ತಾದರೆ, ಬೇಡಪ್ಪಾ ಬೇಡ;
ಇಡೀ ಊರಿಗೆ ಟಾಂ ಟಾಂ
ಡಂಗೂರ ಹೊಡೆದಾರೆಂದು, ನಾಚಿ
ಭಾಮಾಳೊಟ್ಟಿಗೆ ಮನೆಗೆ ಬಂದು
ನನ್ನತ್ತೆಯ ಪ್ರಶ್ನಿಸಿದ್ದೆ, ಭಾಮಾಳೇ
ಮೈನೆರೆದರೆ ನಾ ಏಕಾಗಲಿಲ್ಲ ?  ॥

ಅತ್ತೆ ಹೇಳಿದ ನನ್ನ ಹುಟ್ಟಿನ
ರಹಸ್ಯವ ಕೇಳಿ ಹೀಗೂ ಉಂಟೇ
ನಾ ಹುಟ್ಟಿದಾಗ, ಹೆಣ್ಣೋ ಗಂಡೋ ಎಂದು
ಲಿಂಗ ಪತ್ತೆಯಾಗದಿದ್ದದ್ದು
ನನ್ನ ಹೆತ್ತವರಿಗೂ ಚಿಂತೆ
ಒಂದತ್ತು ವರ್ಷಗಳ ನಂತರ ಬನ್ನಿ
ಪರೀಕ್ಷಿಸುವ, ನಿರ್ಧರಿಸುವ
ಹುಡುಗಿಯೋ, ಹುಡುಗನೆಂದು
ಅಲ್ಲಿಯವರೆಗೂ ಹುಡುಗಿಯಾಗಿಯೇ ಇರಲಿ
ಡಾಕ್ಟರ್ ಸಲಹೆಯಂತೆ
ನಾ ಎಲ್ಲರ ಮುದ್ದಿನ ರಮಾಳಾಗಿದ್ದೆ 
ಶಸ್ತ್ರಚಿಕಿತ್ಸೆಯನಂತರ ರಾಮನಾದೆ ॥

No comments:

Post a Comment