Thursday, March 21, 2013

" ಹಿತ ನುಡಿಗಳು "

1.
ಆತ್ಮ ಪರಮಾತ್ಮನೆಡೆಗೆ ಭಕ್ತಿಯೇ ಸೇತುವೆ
ಪಾಪ ಕರ್ಮಗಳಿಗೆ ದುರ್ಗುಣಗಳೇ ಬೆಸುಗೆ
ದಾನ ಧರ್ಮಗಳೇ ಮುಕ್ತಿಗೆ ದಾರಿ ದೀವಿಗೆ
2.
ಅನ್ಯರ ಅನ್ನಕ್ಕೆಂದೂ ನೀ ಆಸೆ ಪಡಬೇಡ
ತಾನುಣ್ಣುವ ಅನ್ನವನು ನೀ ಹಂಚಿ ನೋಡ
ಹಸಿದವನಿಗಿತ್ತುದು ಆ ಹರನಿಗೆ ನೀ ಇತ್ತಂತೆ
ಹತ್ತಾರು ದೇವರ ಪೂಜಿಸಿ  ಫಲ ಪಡೆದಂತೆ
3.
ಕಣ್ಮುಂದೆ ಹೊಗಳಿ ಬೆನ್ನಿಂದೆ ತೆಗಳುವನ
ನೀನೆಂದು ನಂಬಲೇಬೇಡ
ಬೆನ್ನಿಂದೆ ಹೊಗಳಿ ಕಣ್ಮುಂದೆ ತೆಗಳುವನ
ನೀನೆಂದು ಮರೆಯ ಬೇಡ
4.
ಅವರಿವರ  ನಿಂದಿಸುತ
ತನ್ನವರ ಬೆಂಬಲಿಸುತ
ಜಗದೊಳಗೆ ತಾ ಉತ್ತಮನೆನ್ನುವನ
ಜಗದೀಶ ತಾನೆಂದಿಂತವರ ಮೆಚ್ಚನು
5.
ತಿರುದುಣ್ಣುವನ ಸುಖಕ್ಕಿಂತ
ಬಡಿದುಣ್ಣುವನ ಮನ ಕೀಳು
ದುಡಿದುಣ್ಣುವನ ಗುಣ ಮೇಲೆಂದ ಶಿವಚೆನ್ನ
6.
ವಿವೇಕಿಯೂ, ವಿಚಾರವಂತನೂ
ತಾಳ್ಮೆಯಿಂದಲೇ ತಾಳೆಯ
ಮರದೆತ್ತರಕ್ಕೆರ ಬಲ್ಲ
ಅವಿವೇಕಿಯೂ, ಅನೀತಿಪರನೂ
ತಾಳ್ಮೆಯಿಲ್ಲದೇ ತರಗೆಲೆಯ
ರೀತಿ ಧರೆಗುರುಳ ಬಲ್ಲ
7.
ಎಲ್ಲರೆದಿರು ಹಿಯಾಳಿಸದಿರು, ಹಿಂಸಿಸದಿರು
ಎಲ್ಲರೆದಿರು ತಿಳಿ ಹೇಳಿದರು, ಬುದ್ಧಿ ತಲೆಗೋಗದು
ತಾ ಮಾಡಿದ ತಪ್ಪು ತನಗೆ ಅರಿವಾಗದ ಹೊರತು
ಅಜ್ಞಾನಿಗೆ ಎಂದಿಗೂ ಸುಜ್ಞಾನದ ಬೆಳಕಾಗದು
8.
ಅಡಿ ಗಡಿಗೂ ಅಡೆತಡೆ ಬಂದೊಡೆ
ಜಗ್ಗದೆ ಬಗ್ಗದೇ ಅಪ್ಪಿ ನೀ ನಡೆದೊಡೆ
ಹಿಂದಿಂದೆ ಬರುವುದೈ ಜಯ ನಿನ್ನೆಡೆ
9.
ಹೊತ್ತೊತ್ತಿಗೂ ತುತ್ತಿತ್ತು ಮುತ್ತಿತ್ತೆತ್ತವಳ
ಮುಪ್ಪಿನಾ ಕಾಲದಿ ಉಪ್ಪಿಡದೆ ದೂಡುವನ
ಜಗದೊಳಗೆ ಮೈ ಮರೆತು ಮೆರೆಯುವನ
ತಾನೆಂದು ನೆಚ್ಚನು ತಾನೆಂದು ಮೆಚ್ಚನು
10.
ಅಂಗನೆಯರ ಸರಸ ಪಲ್ಲಂಗದೊಳು
ನಿತ್ಯ ಆನಂದಿಸುವವ ಎಂದೆಂದಿಗೂ 
ಸ್ವಾಮೀಜಿಯಾಗನು ಖಾವಿ ತಾ ತೊಟ್ಟೊಡೆ
ಜನ ಮೆಚ್ಚಿದರೂ, ಶಿವ ತಾನೆಂದು ಮೆಚ್ಚನು
11.
ಕಾಮ-ಕ್ರೋಧ, ಮದ-ಮತ್ಸರಗಳನು ಗೆದ್ದು
ಹೆಣ್ಣು-ಹೊನ್ನು, ಮಣ್ಣು-ಮಮಕಾರಗಳ ಒದ್ದು
ಭುವಿಯಲ್ಲಿ ನಿಂತವನೆ ತಾ ನಿಜವಾದ ಯೋಗಿ
ಭವಿಯಾದರೂ ಪರರ ಕಷ್ಟಕ್ಕಾಗುವನೆ ತ್ಯಾಗಿ
12.
ಣವಿರಲು ನಮ್ಮಲ್ಲೀ ಎಲ್ಲರೂ ನೆಂಟರಿಷ್ಟರೆ
ಹೆಣದಂತೆ ಕಾಣ್ವರು ಬರೀಗೈಲಿ ತಾ ನಿಂತರೆ
ಹಣವಿದ್ದವನ ಹೊತ್ತೆತ್ತಿ ಜಗದಿ ಮೆರೆಸುವರು
ವ್ರಣವಿಡಿದರೂ ಋಣವೆಂದು ಪೂಜಿಸುವರು
13.
ಅವನ ಕಂಡರೆ ಇವನಿಗಾಗದು
ಇವನ ಕಂಡರೆ ಅವನಿಗಾಗದು
ಮೇಲ್ನೋಟಕ್ಕೆ ನಗೆ ಮುಖವಾಡ
ಒಳಗೊಳಗೆ ಬಯಸುವರು ಕೇಡ
14.
ಹಳ್ಳಕ್ಕೆ ಬಿದ್ದರೆ , ಆಳಿಗೊಂದೊಂದು ಕಲ್ಪು
ಸಿಡಿದೆದ್ದರೆ , ಹಿಡಿವರಲ್ಲ ಕೈ- ಕಾಲುಗಳು
ತೆಗಳುವನ ನೀ ನಂಬು ಈ ಧರೆಯೊಳಗೆ
ಹೊಗಳುವವನ ನಂಬದಿರು ಮನದೊಳಗೆ

No comments:

Post a Comment