Thursday, March 21, 2013

" ದಡ್ಡ ಶಿಖಾಮಣಿ "

ನಾನು ಓದಲಿಲ್ಲ, ಕಲಿಯಲಿಕ್ಕೆ ಹೋಗಲಿಲ್ಲ
ಬರೆಯುವುದಕ್ಕೆ ಮೊದಲೇ ಬರುವುದಿಲ್ಲ
ತಲೆಯು ಎಲ್ಲ ಖಾಲಿ ಖಾಲಿ ಖಾಲಿ !

ಹುಟ್ಟುವಾಗಲೇ ಕಿತ್ತು ತಿನ್ನೋ ಬಡತನ
ಹತ್ತು ಹೆತ್ತು ಪಡದಳೆ ಅಮ್ಮ ನನ್ನನಾ
ಅಟ್ಟಿ ಹೈಕಳಾ ನಡುವೆ ನಾ ನರ ಪೇತಲ !

ಹಡದದ್ದೆಲ್ಲ ಹೆಣ್ಣು, ಕೊನೆಗೆ ನಾನೆ ಗಂಡು
ಬೆಳೆದು ನಿಂತ ಅಕ್ಕ, ಸಾಲು ಸಾಲು ಪಕ್ಕ
ಮದುವೆಗೆಂದು ಜೀತಕ್ಕಿಟ್ಟ ಅಪ್ಪ, ಪಡೆದೆ ಬಿಟ್ಟ
ಕಪ್ಪ ನಾ.ಜೀತದಾಳು , ಪರರ ಬಾಳ ಚೇಳು !

ಏಳೊ ಗಡವ ನಿದ್ದೆ ಸಾಕು, ಒದ್ದು ನಿಂತ ಗೌಡ
ನಸುಕಿನಲ್ಲೇ ಎದ್ದು, ಸಗಣಿ ಎತ್ತಿ ಕಸವ ಗುಡಿಸಿ
ದನವ ಕಟ್ಟಿ, ಸೌದೆ ಕಡಿದು ಒಲೆಯ ಹಚ್ಚಿ
ಹೊತ್ತು ಹೋಗದೂ.....ನಾ ಕೂಲಿ ಕೂಲಿ !

ದುಡಿದು ದುಡಿದು ದಣಿದ ಮೈಗೆ
ಭತ್ತ ಬಡಿದು ಬಡಿದು ಬೆಂದ ಕೈಗೆ
ಬಳಪ ಹಿಡಿಯಲಾಗದೇ, ಓದಲಾಗದೇ
ನಿತ್ಯ ನಾ....ಮಾಲಿ ಮಾಲಿ ಮಾಲಿ !

No comments:

Post a Comment