Saturday, May 18, 2013

ನಾನೇ ಬೇರೆ

ನಿನ್ನೀ ಹುಡುಗಾಟಕ್ಕೆ
ಹುಚ್ಚೆದ್ದು ಕುಣಿವ
ಹುಡುಗಿ ನಾನಲ್ಲ !
ನನ್ನೀ ಮನಕೊಪ್ಪದ
ಯಾವುದೇ ಕೆಲಸವ
ನಾ ಎಂದೂ ಮಾಡಲ್ಲ !

ನೀ ಕರೆದೆ ಎಂದು
ನಾ ಎಲ್ಲೆಲ್ಲಿಗೋ
ನಿನ್ನ ಜೊತೆ ಬರಲು
ಈ ಮನ ಎಂದೂ ಒಪ್ಪಲ್ಲ !
ಪೂರ್ವ ಕಾಲದ ಪುಟ್ಟಕ್ಕ
ಎಂದರೂ ಸರಿಯೇ
ಹದಿನಾರಾಣೆಯ ಅಚ್ಚ
ಸಂಸ್ಕೃತಿಯ ಕನ್ನಡತಿ !

ಮದುವೆಗೆ ಮೊದಲೇ
ರೀತಿ ನೀತಿ, ನಿಯಮಗಳ
ಗಾಳಿಗೆ ತೂರಿ, ಹಲ್ಕಿರಿದು
ಮನಸೋ ಇಚ್ಚೆ ಚಕ್ಕಂದಕ್ಕಾಗಿ
ಹಾಡಿ ನಲಿದಾಡುವ ಹೆಣ್ಣಂತೂ ಅಲ್ಲ !

ನನ್ನ ನೀ ಗಂಡುಬೀರಿ
ಸುಂಟರ ಗಾಳಿ, ಬಜಾರಿ
ಎಂದು ಕರೆದರೂ ಸರಿಯೇ !
ನಂಬಿಕೆ, ಅಪನಂಬಿಕೆಗಳ
ಪ್ರಶ್ನೆಗಳ ವಿಷಯವದಲ್ಲ
ನಿನ್ನ ಬಗ್ಗೆ ಗೌರವವಿದೆ
ನನ್ನ ಸಮ್ಮತಿಯ ಒಲವಿದೆ !

ಕಾಲ ಪಕ್ವವಾಗುವರೆಗೂ
ನೀ ನನಗಾಗಿ ಕಾಯಬೇಕು
ಇದು ನನ್ನ ಹಟವಲ್ಲ, ಛಟವಲ್ಲ
ಮನದಾಳದ ವಿನಮ್ರ ವಿನಂತಿ !
ತೊಲಗಲಿ ನಿನ್ನಲ್ಲಿರುವ ಬ್ರಾಂತಿ !

No comments:

Post a Comment