Thursday, July 25, 2013

ತಿರುದುಣ್ಣೋ ತಿರುಕ

ಊರೂರ ಅಲೆದಲೆದು
ಮನೆ ಮನೆಗೂ ತೆರಳಿ
ನಾ ತಿರುದುಣ್ಣೋ ತಿರುಕ
ಏನಿತ್ತರೂ, ಹೇಗಿತ್ತರು
ತಿರುದುಣ್ಣುವುದೇ ಕಾಯಕ !

ನನಗಿಲ್ಲ ಜಾತಿ, ನನಗಿರದು ಧರ್ಮ
ಹಿಂದಿಲ್ಲ ಮುಂದಿಲ್ಲ ನಾ ಪಡೆದ ಕರ್ಮ;
ಆ ಬ್ರಹ್ಮ ಬರೆದ ಹಣೆ ಬರಹದ ಬರಹ
ಈ ಬಿಕನಾಸಿ ಬದುಕು ಧೈನೇಸಿ ತರಹ
ಉಳಿದೆಂಜಲ ತುತ್ತಿತ್ತರೂ, ಮೃಷ್ಟಾನ್ನ ಭೋಜನ ಹಳಸಿದುದ ಎಸೆಯದೆ ಉಳಿದಿತ್ತುದೇ ಪರಮಾನ್ನ!

ಏನಿತ್ತರೂ, ಹೇಗಿತ್ತರು ಬೇಸರ ಎನಗಿಲ್ಲ
ಅನ್ನ ಬ್ರಹ್ಮನ ಮುಂದೆ ಅನ್ಯ ಬ್ರಹ್ಮರಿಲ್ಲ
ಮಳೆಯಿರಲಿ, ಚಳಿಯಿರಲಿ
ಭಿಕ್ಷೆಯ ನಾ ಬೇಡಲೆ ಬೇಕು
ಧಗೆಯಿರಲಿ, ಬಾಯಾರಿರಲಿ
ಶಿಕ್ಷೆಯ ನಾ ಪಡೆಯಲೆ ಬೇಕು !

" ಅಮ್ಮಾ..... ತಾಯಿ " ಭಿಕ್ಷೆ ಎನಲು
ಕರುಣೆ ತೋರೋ ಅನ್ನಪೂರ್ಣೆಯರು
" ಅಮ್ಮ " ಎನ್ನುವೆಯೇನೋ ಎನ್ನುತ
ಜಗಳಕೆ ನಿಲ್ಲುವ ಆ ತಾಯಂದಿರು
ಕೊಟ್ಟದ್ದನು ಪಡೆದು, ಇಟ್ಟದ್ದನು ತಿಂದು
ಉಂಡಾಗಲೇ ಉಗಾಧಿ
ಅಸಿದಾಗಲೇ ಏಕಾದಶಿ !

2 comments:

  1. ಮನಸ್ಸು ಹಿಂಡಿದ ಕವಿತೆ

    ReplyDelete
  2. ಭಿಕ್ಷುಕರ ಬದುಕೇ ಅಲೆಮಾರಿತನ, ನೆಲೆ ಸುರಿಲ್ಲದೆ ಹೊಟ್ಟೇಪಾಡಿಗಾಗಿ ನಿರಂತರ ಮನೆ ಮನೆಯ ಪರ್ಯಾಟನೆ. ಕೆಲವರಿಗಂತೂ ಮೈಬಗ್ಗಿಸಿ ದುಡಿಯಲಾರದೆ ಸುಖಕೆ ಒಗ್ಗಿಕೊಂಡ ಮೈಮನಸು; ಕಷ್ಟವಿಲ್ಲದೆ ಹಣ ಸಂಪಾದನೆಯ ದಂಧೆ ಅಲ್ಲವೇ ಗೆಳಯರೆ.

    ReplyDelete